Saturday, 23 January 2010

ಧರ್ಮಗುರುವಿನ ಮಹತ್ವ

(This is an article on priesthood written by Mr. Prashanth Ignatius. He is an accounting manager in a company called Face Time.)

ನಮ್ಮೂರಲ್ಲಿ ಒಬ್ಬ ಮುದುಕಿ ಇತ್ತು. ದಿನವೂ ಪೂಜೆ, ಜಪಸರಕ್ಕೆ ತಪ್ಪದೆ ಹಾಜರಾಗಿ ಯಾರಿಗೂ ತೊಂದರೆ ಕೊಡದೆ, ತನ್ನಷ್ಟಕ್ಕೆ ತಾನೇ ಏನೋ ಮಾತನಾಡುತ್ತಾ ಜನ ಕೊಟ್ಟದನ್ನು ತಿನ್ನುತ್ತಾ ತಿರುಗಾಡುತ್ತಿದ್ದ ನಿರುಪದ್ರವಿ ಜೀವಿ. ಮಾನಸಿಕ ಸ್ಥಿಮಿತವಿಲ್ಲ ಎಂದು ನೋಡಿದೊಡನೆ ಹೇಳಬಹುದಿತ್ತು. ಅಷ್ಟೆಲ್ಲ ಭಕ್ತಿ, ಸ್ವಚ್ಛತೆ,ಉತ್ತಮ ನಡುವಳಿಕೆ ಇದ್ದ ಈಕೆ ಹೀಗೇಕೆ ಎಂಬುದು ಬಾಲ್ಯದಲ್ಲಿ ನಮ್ಮಗೆಲ್ಲಾ ಒಂದು ಸೋಜಿಗದ ನಡುವೆ ಊರಿನ ವಿಚಾರಣೆ ಗುರುಗಳನ್ನು ಒಮ್ಮೆ ನಿಂದಿಸಿ, ಬೈದು ಅವರ ಮಾತುಗಳನ್ನು ಅಲಕ್ಷಿಸಿದ ಪರಿಣಾಮವಾಗಿ ಹುಚ್ಚು ಹಿಡಿದು ಹೀಗೆ ಊರೆಲ್ಲಾ ತಿರುಗುತ್ತಿದ್ದಾಳೆ ಎಂಬ ಕಥೆ ಮಾತ್ರ ಆಕೆಯ ಬಗ್ಗೆ ಊರಿನಲ್ಲಿ ಪ್ರಚಲಿತವಾಗಿತ್ತು. ಇದು ನಮ್ಮ ಜನಗಳಲ್ಲಿ ಒಬ್ಬ ಕ್ರೈಸ್ತ ಪಾದ್ರಿ ಅಥವಾ ಗುರುವಿನ ಬಗ್ಗೆ ಇರುವ ಗೌರವ, ಭಕ್ತಿ, ಭಯಕ್ಕೆ ಅಂತೆಯೇ ಮೂಢತನಕ್ಕೆ ಸಣ್ಣ ಉದಾಹರಣೆ. ಆ ಕಥೆ ನಿಜವೋ ಸುಳ್ಳೋ ಎಂಬ ಜಿಜ್ಞಾಸೆಗಿಂತ ಗುರುಗಳ ಹಾಗೂ ಧರ್ಮಸಭೆಯಲ್ಲಿನ ಅವರ ಪ್ರಶ್ನಾತೀತ ಸ್ಥಾನದ ಪರಿಕಲ್ಪನೆಯ ಸ್ಪಷ್ಟ ನಿದರ್ಶನವಂತೂ ಹೌದು.


ಒಬ್ಬ ಕ್ರೈಸ್ತ ಧರ್ಮಗುರು ಅಥವಾ ನಮ್ಮ ಜನರ ಬಾಯಲ್ಲಿ ನಲಿದಾಡುವ "ಸಾಮೇರು"(ಸ್ವಾಮಿಯವರು ಎಂಬುದರ short formಇರಬೇಕು) ಅಥವಾ ಇತ್ತೀಚಿನ "ಫಾದರ್", ಜನ ಸಾಮನ್ಯರಿಂದ ಗಳಿಸುವ, ಅನುಭವಿಸುವ ಗೌರವ ಪ್ರೀತ್ಯಾಧರಗಳು ನಿಜಕ್ಕೂ ಒಂದು ಅನನ್ಯ ಸಂಗತಿ. ಅದು ಇತರ ಧರ್ಮಗಳ ಗುರುಗಳು ಅನುಭವಿಸುವ ದೈವ ಸಂಭೂತತೆಯ ಆರಾಧನೆಗಿಂತ ಭಿನ್ನವಾದ ಬೇರೆಯಾದೇ ಆದ ಒಂದು ವಿಷಿಷ್ಠವಾದ ಆದರಣೆ. ಹಿಂದಿನ ಕಾಲದಲ್ಲಿದ್ದ ಭಯ,ಭಕ್ತಿ,ಆರಾಧನೆಯ ತೀವ್ರತೆ ಇಂದಿನ ದಿನಗಳಲ್ಲಿ ಕಾಣಸಿಗದಿದ್ದರೂ ಒಬ್ಬ ಕ್ರೈಸ್ತ ಧರ್ಮಗುರುವಿನ ಬಗೆಗಿನ ಗೌರವಕ್ಕೆ ಚ್ಯುತಿಯಂತೂ ಇನ್ನೂ ಬಂದಿಲ್ಲ. ನಮಗಂತೂ ಬಾಲ್ಯದಲ್ಲೆಲ್ಲಾ ಫಾದರ್ ಗಳೆಂದರೆ ಒಂದು ರೀತಿಯ ಪೂಜ್ಯ ಭಾವದ ಜೊತೆಗೆ ಹೇಳಲಾಗದ ಗೌರವ. ಅದಕ್ಕೆ ಕಾರಣಗಳು ಇಲ್ಲದಿಲ್ಲ. ಬಹಳ ಹತ್ತಿರದಿಂದ ನೋಡುತ್ತಿದ್ದ ಗುರುಗಳ ನಿಲುವು, ಮಾತುಗಾರಿಕೆ, ಗಾಂಭೀರ್ಯ,ಜನ ಪ್ರೀತಿ,ವ್ಯಕ್ತಿತ್ವ ಗೌರವ ಉಕ್ಕಿಸುವಂತಿತ್ತು.


ಒಬ್ಬ ಸಾಮಾನ್ಯನ ಯಾಜಕ ದೀಕ್ಷೆಯೆಡೆಗಿನ ಪಯಣ ಆಕಸ್ಮಿಕವಲ್ಲವೆಂಬುದು ನಾವೆಲ್ಲರೂ ನಂಬಿಕೊಂಡು ಬಂದಿರುವ ಸಂಗತಿ. ಒಬ್ಬ ಕ್ರೈಸ್ತ ಧರ್ಮ ಗುರುವಾಗಬೇಕಾದರೆ ಆತನಿಗೆ ದೈವಕರೆಯಿರಬೇಕಾದುದು ಅತ್ಯವಶ್ಯಕವೆಂಬುದು ಎಂಬ ಪರಿಕಲ್ಪನೆಯನ್ನು ಕಥೋಲಿಕ ಕ್ರೈಸ್ತ ಧರ್ಮಸಭೆ ಹಿಂದಿನಿಂದಲೂ ಪೋಷಿಸಿಕೊಂಡು ಬಂದಿದೆ. ಹಾಗೆ ದೈವ ಕರೆಯನ್ನು ಪಡೆದಂಥ ಬಾಲಕನ ಯಾಜಕ ದೀಕ್ಷೆಯೆಡೆಗಿನ ಪಯಣದ ಪರಿಕಲ್ಪನೆಯೇ ಸುಂದರ. ಸೆಮಿನೆರಿಗೆ ಆಯ್ಕೆಯಿಂದು ಹಿಡಿದು, ಸುದೀರ್ಘವಾದ ಶಿಕ್ಷಣದ ಮಧ್ಯೆ, ಧರ್ಮಕೇಂದ್ರಗಳ, ಜನರ ನಡುವಿನ ಅನುಭವಗಳಿಂದ ಪರಿಪೂರ್ಣತಯನ್ನು ಪಡೆದು ಎಲ್ಲಾ ರೀತಿಯಲ್ಲೂ ಸಿದ್ಧವಾಗಿ ಆದರ್ಶ ಗುರುವಾಗಿ ರೂಪಿತವಾಗುವ ಈ ಪಯಣ ಸಾಮನ್ಯ ಜನರಿಗೆ ನಿಜಕ್ಕೂ ಅಚ್ಚರಿ, ಬೆರಗು, ಗೌರವ ಹಾಗೂ ಭಕ್ತಿಯನ್ನು ಹುಟ್ಟಿಸುವ ವಿಷಯವೇ.


ಹಿಂದಿನ ಕಾಲದ ಪಾದ್ರಿಗಳ ಜೀವನಕ್ರಮವನ್ನು ಅವಲೋಕಿಸಿದಾಗ ಅವರೆಡೆಗಿನ ಗೌರವ ಪೂಜ್ಯ ಭಾವಕ್ಕೆ ತಿರುಗುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಹಿಂದೆ ಒಬ್ಬ ಗುರುವಿಗೆ ಇದ್ದ ಸವಾಲುಗಳೇ ಬೇರೆ ರೀತಿಯದು. ಅನಕ್ಷರಸ್ಥರೇ ತುಂಬಿದ್ದ ಸಮಾಜದಲ್ಲಿ ಶುಭ ಸಂದೇಶವನ್ನುಬೋಧಿಸುವುದು ಹಾಗೂ ಅದರ ತಿರುಳನ್ನು ಅರ್ಥೈಸುವುದು ಸುಲಭದ ವಿಷಯವಾಗಿರಲಿಲ್ಲ. ಅದರಲ್ಲೂ ಭಾರತದಲ್ಲಿ ಪಾದ್ರಿಗಳು ಪಟ್ಟಿರುವ ಶ್ರಮ ನಿಜಕ್ಕೂ ಶ್ಲಾಘನೀಯವೇ. ಎಲ್ಲಾ ರೀತಿಯಲ್ಲೂ ಪ್ರತಿಕೂಲವೇ ಆಗಿರುವ ವಾತಾವರಣದಲ್ಲಿ ಜನರ ಪ್ರೀತಿ, ಭಕ್ತಿ, ಗೌರವವನ್ನೂ ಗಳಿಸುವುದು ಮಾತ್ರವಲ್ಲದೆ ಅವರನ್ನು ಒಂದು ರೀತಿಯ ಭಯ, ನೀತಿ ನಿಯಮಗಳ ಚೌಕಟ್ಟಿನಲ್ಲಿಡಬೇಕಾದ ಅವಶ್ಯಕತೆಯೂ ಇತ್ತು. ಅಲ್ಲದೆ ಇವುಗಳೆಲ್ಲವನ್ನು ಇದನ್ನು ಒಂದು ರೀತಿಯಲ್ಲಿ ಸಮವಾಗಿ ತೂಗಿಸಿಕೊಂಡು ಹೋಗುವ ಅನಿವಾರ್ಯತೆಯೂ ಇತ್ತು. ಏಕೆಂದರೆ ಕ್ರೈಸ್ತ ಧರ್ಮಕ್ಕೆ ಆಗಿನ್ನೂ ಬಾಲ್ಯಾವಸ್ಥೆ, ಈಗಿನ ರೀತಿಯಲ್ಲಿ ಸಂವಿಧಾನ, ಕಾನೂನಿನ ಸಹಾಯ, ಸಹಕಾರ ಬೆಂಬಲವಂತೂ ದೂರದ ಮಾತೇ. ಇಂತಹ ಸಮಯದಲ್ಲಿ ಸ್ಥಳೀಯ ಜನ, ಅಧಿಕಾರಿ, ರಾಜ್ಯವಾಳುವವನ ಸಹಕಾರವಿಲ್ಲದಿದ್ದರೆ ಸಹಾಯಕ್ಕೆ ಬರಬೇಕಾದವರು ಇದೇ ಸಮಾನ್ಯ ಜನ. ಅವರೊಳಗೊಂದಾಗಿ,ಅವರಂತೆ ಬಾಳಿ, ಅವರನ್ನು ನಿಯಂತ್ರಿಸುತ್ತಾ, ಅವರನ್ನು ಒಳ್ಳೆಯ ಕ್ರೈಸ್ತರನ್ನಾಗಿ ಮಾಡುವ ಕೈಂಕರ್ಯ ಹೊತ್ತ ಅಂದಿನ ಗುರು ಪಾದ್ರಿಗಳ ಸಹನೆ, ಬುದ್ಧಿಮತ್ತೆ, ಸುವಾರ್ತಯನ್ನು ಸಾರುವಲ್ಲಿನ್ನ ಬದ್ದತೆ ನಿಜಕ್ಕೂ ಪೂಜನೀಯ. ಹಿಂದಿನ ಕಾಲದಲ್ಲೆಲ್ಲಾ ಜನ ಒಬ್ಬ ಗುರುವಿಗೆ ಎಷ್ಟು ಹೆದರುತ್ತಿದ್ದರು, ಮಾತಿಗೆ ಗೌರವ ಕೊಡುತ್ತಿದ್ದರು ಎಂದು ಹಿರಿಯರ ಬಾಯಲ್ಲಿ ನಾವು ಕೇಳುವಾಗ ಅದು ಕೇವಲ ಅಧಿಕಾರ ಧೋರಣೆಯಿಂದ ಬಂದದ್ದಲ್ಲ, ಅದು ಪ್ರೀತಿ,ಭಕ್ತಿ ಹಾಗೂ ಸೇವೆಯ ಮನೋಭಾವದಿಂದ ಹುಟ್ಟಿಕೊಂಡದ್ದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.


ಮುಂದೆ ಜನರಿಂದ ಗಳಿಸಿದ ಇದೇ ಪ್ರೀತ್ಯಾದ ಗೌರವಗಳನ್ನು ಧರ್ಮಸಭೆಯ ಏಳಿಗೆಗಾಗಿ ಬಳಸಿಕೊಳ್ಳಬೇಕಾದ ಅವಶ್ಯಕತೆ, ಅನಿವಾರ್ಯತೆ ಗುರುಗಳಾದ್ದಗಿತ್ತು. ಅಂತೆಯೇ ಅನೇಕ ಕಟ್ಟುಪಾಡುಗಳೊಂದಿಗೆ ನಮ್ಮ ಧರ್ಮಸಭೆ ಬೆಳೆದು ಬಂದಿದೆ. ಈ ನೀತಿ ಕಟ್ಟುಗಳು ಒಂದು ಸಂಪ್ರದಾಯವಾಗಿ ಬೆಳೆದುಬಂದಿರುವ ನಿದರ್ಶನಗಳೂ ಹಲವು.


ಇಂದು ಒಬ್ಬ ಧರ್ಮಗುರುವಿನ ಸವಾಲು ಹಾಗು ಪಾತ್ರ ಬೇರೆಯದೇ ರೀತಿಯದು.ಶುಭ ಸಂದೇಶದ ಪ್ರಚಾರ ಕಾರ್ಯವು ಹಿಂದಿನಷ್ಟು ಶ್ರಮದಾಯಕವಲ್ಲ, ಒತ್ತಡವೂ ಇಲ್ಲ. ಬದಲಾಗುತ್ತಿರುವ ಸಾಮಾಜಿಕ, ಅರ್ಥಿಕ ವಾತಾವರಣದಲ್ಲಿ ಜನರ ಜೀವನ ಶೈಲಿ,ಆಧ್ಯಾತ್ಮಿಕತೆ ಹಾಗೂ ಯೋಚನಾಲಹರಿಗಳು ಬದಲಾಗಿವೆ. ಈ ಸಂದರ್ಭದಲ್ಲಿ ತನ್ನ ವ್ಯಯಕ್ತಿಕ ನೆಲೆಯಲ್ಲಿ ಆಧುನಿಕ ಪ್ರಪಂಚದ ಎಲ್ಲಾ ಆಕರ್ಷಣೆಗಳ ಮಧ್ಯೆಯೂ ತನ್ನ ಆಧ್ಯಾತ್ಮಿಕ ಕರ್ತವ್ಯ, ಜವಬ್ದಾರಿಗಳನ್ನು ನಿರ್ವಹಿಸುತ್ತಾ ಸುಷಿಕ್ಷಿತ ಜನರ ನದುವೆ ಮಾದರಿಯಾಗಿ ಬಾಳುವುದೇ ಬಹು ದೊಡ್ಡ ಸವಾಲಾಗಿದೆ. ಇಂದಿನ ಕ್ರೈಸ್ತರ ಸ್ಥಿತಿಗತಿಗಳನ್ನು ಅವಲೋಕಿಸಿದಾಗ ಶುಭಸಂದೇಶದ ಪ್ರಚಾರ ಕಾರ್ಯವು ಇತರರಿಗಿಂತ ಕ್ರೈಸ್ತ್ರರಲ್ಲೇ ಹೆಚ್ಚಾಗಿ ಆಗಬೇಕಾದ ಅವಶ್ಯಕತೆ ಕಾಣಸಿಗುತ್ತದೆ. ಯೇಸುಕ್ರಿಸ್ತರ ಮೌಲ್ಯ,ಆಶಯ, ವಾಕ್ಯದ ಸಾರವು ಪ್ರತಿಯೊಬ್ಬ ಕ್ರ್ಸೈಸ್ತನ ಅನುದಿನದ ನದೆನುಡಿಗಳಲ್ಲಿ ಪ್ರತಿಬಿಂಬಿಸಿದಾಗ ಮಾತ್ರ ಕ್ರೈಸ್ತ ಧರ್ಮ ಮತ್ತಷ್ಟು ಬೆಳೆಯಬಹುದು, ಇತರರನ್ನು ಆಕರ್ಷಿಸಬಹುದೆಂಬ ಸತ್ಯವು ನಮ್ಮೆಲ್ಲರ ಮನದಾಳದಲ್ಲಿ ಇಳಿಯಬೇಕಾಗಿದೆ. ಈ ನಿಟ್ಟಿನಲ್ಲಿ ಅದು ಪ್ರತಿಯೊಬ್ಬ ಕ್ರೈಸ್ತನ ಜವಬ್ದಾರಿಯಾದರೂ ಒಬ್ಬ ಪಾದ್ರಿ ಅಥವಾ ಧರ್ಮಗುರುವಿನ ಪಾತ್ರ ಮಹತ್ವದಾಗಿದೆ. ಸಂಪ್ರದಾಯದಂತೆ ಬೆಳೆದುಬಂದಿರುವ ಜನಸಾಮನ್ಯರ ಗೌರವ, ಭಕ್ತಿಯನ್ನು ಬಳಸಿಕೊಂಡು ಅವರ ಪ್ರೀತಿ ವಿಶ್ವಾಸ ಗಳಿಸಿ ಅವರನ್ನು ಹುರಿದುಂಬಿಸುವ ಪ್ರೇರಕಶಕ್ತಿಯಾಗಿ ನಿಲ್ಲುವ ಅವಕಾಶವನ್ನು ಬಳಸಿಕೊಳ್ಳಲಾಗಿದೆ. ಲೌಕಿಕತೆಯಲ್ಲಿ ಮುಳುಗಿ ಕುರಿಮಂದೆಯಂತಾಗಿರುವ ಜನರಿಗೆ ಒಳ್ಲೆಯ ಕುರುಗಾಹಿಗಾಳಾಗುವ ಅವಶ್ಯಕತೆ ಇದೆ.


ಅಂತೆಯೇ, ಧರ್ಮಸಭೆ ನಿಯೋಜಿಸಿರುವ ಅರ್ಥಗರ್ಭಿತ ವಿಧಿ ನಿಯಮಗಳು ಕೇವಲ ಯಾಂತ್ರಿಕವಾದ ಆಚರಣೆಗಳಾಗುತ್ತಿರುವ ಅಪಾಯವನ್ನು ಧರ್ಮಸಭೆ ಎದುರಿಸುತ್ತಿದೆ. ಬಲಿ ಪೂಜೆಗಳು, ಸಾಂಗ್ಯ, ಪ್ರಾರ್ಥನಾ ಸಭೆಗಳು,ಪ್ರಬೋಧನೆಗಳು ಭಕ್ತರ ಆಂತರ್ಯವನ್ನು ಮುಟ್ಟದೆ, ಆಧ್ಯಾತ್ಮಿಕತೆಯನ್ನು ಉದ್ಢೀಪಿಸದೆ ಕೇವಲ ಬಾಹ್ಯ ಆಚರಣೆಗಳಾಗದೆ ಕ್ರಿಸ್ತನನ್ನು ನೆನೆಯುವ, ಅವರ ಮೌಲ್ಯಗಳನ್ನು ಅರಿಯುವ ಸಾಧನಗಳಾಗುವಂತೆ ಮಾಡುವ ಜವಬ್ದಾರಿಯೂ ಗುರು ಸಮೂಹದ್ದಾಗಿದೆ.

No comments:

Post a Comment