Wednesday, 13 January 2010

ಯಾಜಕ ...

ಯಾಜಕರ ಪಾಲಕ ಸಂತ ಜಾನ್ ಮೇರಿ ವಿಯಾನ್ನಿ ಯವರ ಮರಣದ 150 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಅಂದರೆ 2009ರ ಜುಲೈ19 ರಂದು ಜಗದ್ಗುರು 16ನೇ ಭಕ್ತಿನಾಥರು ಯಾಜಕರ ವರ್ಷವನ್ನು ಘೋಷಿಸಿದರು. ಯಾಜಕರ ಈ ಸಂವತ್ಸರದಲ್ಲಿ ವಿವಿಧ ಸ್ತರಗಳಲ್ಲಿ ಚರ್ಚೆ,ವಿಚಾರ ಮಂಡನೆ ಮತ್ತು ಚಿಂತನೆಗಳು ನಡೆಯುತ್ತಿವೆ. ಜತೆಗೆ ವಿವಿಧ ಧರ್ಮಕೇಂದ್ರಗಳಿಂದ ಪ್ರಕಟವಾಗುವ ಪತ್ರಿಕೆಗಳಲ್ಲಿ, ಸುತ್ತೋಲೆಗಳಲ್ಲಿ ಪ್ರಕಟವಾಗುವ ಲೇಖನಗಳಲ್ಲಿ ಯಾಜಕೀ ಜೀವನವನ್ನು ಕುರಿತ ಮಾಹಿತಿ ಯಥ್ಠೇಚವಾಗಿ ಪ್ರಕಟವಾಗುತ್ತಿದೆ.
ನಿಜಕ್ಕೂ ಯಾಜಕರ ಕುರಿತ ನಮ್ಮ ಜ್ಞಾನ ಮತ್ತಷ್ಟು ವೃದ್ಧಿಯಾಗಿದೆ.ಇವೆಲ್ಲವೂಗಳ ಮುಖಾಂತರ ದೇವರು ನಮ್ಮೆಲ್ಲರಿಗೂ ಹೇರಳವಾದ ವರದಾನಗಳನ್ನು ದಯಪಾಲಿಸುವರು ಎಂಬುದರಲ್ಲಿ ಸಂಶಯವಿಲ್ಲ.
1959ರಲ್ಲಿ ಸಂತ ಜಾನ್ ಮೇರಿ ವಿಯಾನ್ನಿಯವರ ಮರಣದ ಶತಮಾನೋತ್ಸವದ ಸಂದರ್ಭದಲ್ಲಿ ಅಂದಿನ ಜಗದ್ಗುರು 23ನೇ ಅರುಳಪ್ಪರವರು ಪ್ರಕಟಿಸಿದ ವಿಶ್ವಪತ್ರದಲ್ಲಿ (Nostri Sacerdotii Primitias) ಯಾಜಕತ್ವದ ರಹಸ್ಯದ ಕುರಿತು ವಿವರಿಸಿದರು. ನಂತರ 1986ರಲ್ಲಿ ಜಗದ್ಗುರು ಎರಡನೇ ಜಾನ್ ಪಾಲ್, ಪವಿತ್ರಗುರುವಾರದಂದು ಪ್ರಕಟಿಸಿದ ಪತ್ರವೊಂದರಲ್ಲಿ ಯಾಜಕದೀಕ್ಷೆಯ ಮಹತ್ವವನ್ನು ವಿವರವಾಗಿ ತಿಳಿಯಪಡಿಸಿದರು. ಯಾಜಕದೀಕ್ಷೆಗೆ ಪ್ರಾಮುಖ್ಯತೆ ನೀಡಿರುವ ಈ ಮೂವರು ಜಗದ್ಗುರುಗಳು ಸಂತ ಜಾನ್ ಮೇರಿ ವಿಯಾನ್ನಿಯವರ ಯಾಜಕೀ ಜೀವನದಲ್ಲಿ ನಡೆದ ಘಟನೆಗಳನ್ನು ಪ್ರಶಂಸಿಸಿದ್ದಾರೆ. ಅವರ ಜೀವನ ಮೌಲ್ಯಗಳಿಂದ ಪ್ರೇರಿತರಾಗಿದ್ದಾರೆ.
ಜಾನ್ ಮೇರಿ ವಿಯಾನ್ನಿಯವರ ಜೀವನ ಚರಿತ್ರೆಯನ್ನು ಓದಿದವರ ಮನದಲ್ಲಿ ಒಂದು ಪ್ರಶ್ನೆಯನ್ನು ಕೇಳಿಯೇ ಕೇಳುತ್ತಾರೆ. ಯಾಜಕನ ವೈಯುಕ್ತಿಕ ಜೀವನದ ಹಿನ್ನೆಲೆ ಎಷ್ಟು ಮುಖ್ಯ? ಯಾಜಕರು ಮಾನವ ಸಮುದಾಯದಿಂದ ಆಯ್ಕೆಯಾದವರು. ಇತರ ಎಲ್ಲಾ ಮಾನವರಂತೆ ಮಾನವ ಸಾಮರ್ಥ್ಯಗಳಲ್ಲೂ, ದೌರ್ಬಲ್ಯಗಳಲ್ಲೂ ಜೀವಿಸುತಾರೆ. ಜಾನ್ ಮೇರಿ ವಿಯಾನ್ನಿಯವರ ಬಡತನದ ದೀನ ಬದುಕಿನ ಹಿನ್ನೆಲೆ ಅವರ ಯಾಜಕೀ ಜೀವನಕ್ಕೆಯಾವುದೇ ದಕ್ಕೆ ತರಲಿಲ್ಲ. ಅವರ ಕರೆಯನ್ನು ರಕ್ಷಿಸುವ ಸಲುವಾಗಿ ತನ್ನ ಕುಟುಂಬದವರು ಅನೇಕ ತ್ಯಾಗಗಳನ್ನು ಮಾಡಬೇಕಾಯಿತು. ಆದರೆ ಅವರ ಕುಟುಂಬದಲ್ಲಿನ ಬಡತನ ಅವರ ಯಾಜಕೀಯ ಕರೆಗೆ ಅಡ್ಡಿಯಾಗಲಿಲ್ಲ. ಅವರ ಕುಟುಂಬದಲ್ಲಿದ್ದ ಆಧ್ಯಾತ್ಮಿಕ ವಾತಾವರಣ ಅವರ ಕರೆಯನ್ನು ದೈರ್ಯವಾಗಿ ಸ್ವೀಕರಿಸಲು ನೆರವಾಯಿತು. ಅವರು ಸೇವೆ ಸಲ್ಲಿಸುತ್ತಿದ್ದ ಫ್ರಾನ್ಸ್ ದೇಶದ ಹಳ್ಳಿ ಪ್ರದೇಶದ ವಿಚಾರಣೆಯೊಂದರಲ್ಲಿ ಇವರ ಕ್ರಿಸ್ತೀ ಆದರ್ಶ ಜೀವನವೇ ಅಲ್ಲಿನ ಜನತೆಗೆ ಶುಭಸಂದೇಶವಾಯಿತು. ಉತ್ತಮ ಪ್ರಭೋದಕ ರಲ್ಲದಿದ್ದರೂ ಕ್ರಿಸ್ತನ ಪ್ರತಿಬಿಂಬವಾದರು. ದೇವರ ಕಲ್ಪನೆಯಲ್ಲಿ ಸೃಷ್ಟಿಯಾಗಿರುವ ಮಾನವರೆಲ್ಲರಿಗೂ ದೇವರ ಪ್ರತಿಬಿಂಬಗಳಾಗಲು ಆಹ್ವಾನವಿದೆ. ವಿಯಾನ್ನಿಯವರು ನಡೆಸಿದ ನಿಷ್ಠೆಯ ಬದುಕು ಅವರನ್ನು ಕ್ರಿಸ್ತನ ಪ್ರತೀಕವಾಗಿಸಿತು. ಯಾಜಕರಾದವರು ಅವರ ಬುದುಕಿನ ಮುಖಾಂತರ- ದೇವರು ಇಂದಿಗೂ, ನಮ್ಮೊಡನೆ, ನಮ್ಮೆಲ್ಲ ಕೆಲಸಕಾರ್ಯಗಳಲ್ಲಿ ಜೀವಂತವಾಗಿ ಕ್ರಿಯಾಶೀಲರಾಗಿದ್ದಾರೆ ಎಂಬ ಸಂದೇಶವನ್ನು ಸಾರುವಂತವರಾಗಲಿ.(ಮುಂದುವರೆಯುವುದು)
-ಮೆಲ್ವಿನ್ ಲೋಬೋ ಎಸ್. ಜೆ

No comments:

Post a Comment